Friday, December 2, 2011

ಹೀಗೊಂದು ಕನಸು: ಮಡೆಸ್ನಾನ ಎಂಬ ಅಸಹ್ಯವನ್ನು ಮೇಲ್ಜಾತಿಯವರೆ ಪ್ರತಿಭಟಿಸುವಂತಿದ್ದರೆ...

-ಹನುಮಂತ ಹಾಲಿಗೇರಿ

“ಹಾಡ ಹಾಡೋ ಅಂದ್ರ ಹಾಡಿದ್ದ ಹಾಡತಾನ ಕಿಸಬಾಯಿದಾಸ” ಅಂತ ಬೇಸರ ಮಾಡ್ಕೋಬೇಡಿ. ನಾನು ಏನು ಆಗಬಾರದು ಅಂತ ಆಶಿಸಿ ಮಡೆಸ್ನಾನದ ಬಗ್ಗೆ ಲೇಖನ ಬರೆದಿದ್ದೇನೋ ನನ್ನ ಲೇಖನಕ್ಕೂ ಅದೆ ಗತಿಯಾಗಿದೆ. ಲೇಖನಕ್ಕೆ ಪರ-ವಿರೋಧಗಳ ಪ್ರತಿಕ್ರಿಯೆಗಳು ಬಂದಿವೆಯಾದರೂ ಅದರಲ್ಲಿ ಬಹುತೇಕ ಮೇಲ್ವರ್ಗದವರು ಮಡೆಸ್ನಾನದ ಪರವಾಗಿಯೂ ಕೆಳವರ್ಗದವರು ವಿರೋಧವಾಗಿಯೂ ಬರೆದಿದ್ದಾರೆ. ಇದು ಸ್ವಲ್ಪ ಬದಲಾಗಿ ಪ್ರತಿಯೊಬ್ಬ ಮೇಲ್ವರ್ಗದವರೂ ವಿರೋಧವಾಗಿದ್ದಿದ್ದರೆ ಎಷ್ಟೊಂದು ಚಂದವಿರುತ್ತಿತ್ತಲ್ಲವೇ?

ಲೇಖನ ಪ್ರಕಟವಾದ ದಿನ ಫೇಸ್‌ಬುಕ್‌ನಲ್ಲಿ ಕೆಲವರಂತೂ ನಿನಗೆ ಒಂದೆರಡು ಪ್ರಶಸ್ತಿಗಳು ಬಂದಿದ್ದು, ಅವು ನಿನ್ನನ್ನು ಹೀಗೆ ಬರೆಸುತ್ತವೆ. ದೇವರ ಸಮಾನವಾದ ಗೋವು ಕಡಿದು ಗೋಮಾಂಸ ತಿನ್ನುವ ಅಸಹ್ಯ ಎನಿಸದ ನಿಮ್ಮಂಥ ವಿಕೃತ ಮನಸ್ಸಿನವರಿಗೆ ಮಡೆಸ್ನಾನದಂತಹ ಆಚರಣೆಗಳು ಮಾತ್ರ ಅಸಹ್ಯ ಎನಿಸುತ್ತವೆ ಎಂದು ನನ್ನ ವೈಯಕ್ತಿಕ ನಿಂದನೆಗೆ ಇಳಿದುಬಿಟ್ಟರು.

ನಮ್ಮ ಮನೆಯಲ್ಲಿ ಕೂಡ ಆಕಳು, ಎಮ್ಮೆ, ಕುರಿ, ಕೋಳಿ, ಮೇಕೆ, ನಾಯಿ, ಬೆಕ್ಕುಗಳಿವೆ. ಈಗಲೂ ಕೂಡ ನಾನು ಊರಿಗೆ ಹೋದಾಗ ಎಮ್ಮೆ-ಆಕಳಗಳ ಮೈದಡವಿ ಮೈತೊಳೆದು, ಸಗಣಿ ಬಾಚಿ, ಮೇವು ಹಾಕುವ ಕೆಲಸವನ್ನು ಖುಷಿಯಿಂದ ಮಾಡುತ್ತೇನೆ. ಆದರೆ ಅವೆಲ್ಲ ನಮಗೆ ದೇವರು ಎನ್ನುವುದಕ್ಕಿಂತಲೂ ನಮ್ಮ ತೋಟ ಎಂಬ ಮಿನಿ ವಿಶ್ವದ ಜೀವ ಸದಸ್ಯರು. ಒಮ್ಮೊಮ್ಮೆ ನಾಯಿ ಮೇಕೆ ಮರಿಯನ್ನು, ಬೆಕ್ಕು ಕೋಳಿಮರಿಯನ್ನು ಬೇಟೆಯಾಡುವುದು ಇರುತ್ತದೆ. ಹಾಗಂತ ನಮ್ಮ ತೋಟದ ಮಾಲಿಕ ನಮ್ಮಪ್ಪ ಬೆಕ್ಕು ಅಥವಾ ನಾಯಿಯ ಜೀವ ತೆಗೆಯುವಂಥ ಕ್ರಮ ತೆಗೆದುಕೊಂಡಿದ್ದಿಲ್ಲ. ಹಣದ ಅಗತ್ಯಕ್ಕೆ ಅನುಗುಣವಾಗಿ ಈ ಜೀವ ಸದಸ್ಯರನ್ನು ಮಾರಾಟ ಮಾಡೊದು ಅಥವಾ ಮುದಿಯಾದ ಆಕಳು, ಎತ್ತು ಅಥವಾ ಎಮ್ಮೆಗಳನ್ನು ಕಟುಕರಿಗೆ ಮಾರುವುದು ಇದೆ. ಕೆಲವೊಮ್ಮೆ ಮನೆಗೆ ನೆಂಟರು ಬಂದ ಖುಷಿಯಲ್ಲಿ ಘಮಘಮಿಸುವ ಕೋಳಿ ಸಾರು ಸಿದ್ದವಾಗುತ್ತದೆ.

ಇದನ್ನೆಲ್ಲ ಯಾಕೆ ಹೇಳಬೇಕಾಗಿ ಬಂತೆಂದರೆ ಮಾಂಸಾಹಾರ ನಿಸರ್ಗದ ನಿಯಮದಲ್ಲಿಯೆ ಮಿಳಿತವಾಗಿರುವಾಗ ಅದನ್ನು ಅಸಹ್ಯ ಎಂದರೆ ಏನು ಹೇಳುವುದು. ಒಂದು ಜೀವಿಯಲ್ಲಿಯೆ ಇನ್ನೊಂದು ಜೀವಿಯ ಆಹಾರವಿದೆ. ಹಾಲು ಕೊಡುವ ಆಕಳು, ಕರು, ಹೊಲ ಉಳುಮೆ ಮಾಡಲು ಅರ್ಹವಿರುವ ಎತ್ತನ್ನು ಹತ್ಯೆ ಮಾಡಬಾರದು, ಇನ್ನುಳಿದಂತೆ ಮುದಿಯಾದ ಗೋವನ್ನು ಮಾಂಸಕ್ಕೆ ಬಳಸಬಹುದು ಎಂದು ದೇಶದ ಕಾನೂನೆ ಹೇಳುತ್ತೆ. ಅಷ್ಟಕ್ಕೂ ಗೋವು ಒಂದನ್ನೆ ಮಾತ್ರ ಹತ್ಯೆ ಮಾಡಬಾರದು ಎಂದು ಪಟ್ಟು ಹಿಡಿಯುವ ಇಬ್ಬಂದಿತನದ ಹಿಂದಿನ ಹುನ್ನಾರವೇನು? ಒಂದು ವೇಳೆ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿದರೆ ಮಂಸಾಹಾರವನ್ನು ಅವಲಂಭಿಸಿರುವ ಜನರ ಪರ್ಯಾಯ ವ್ಯವಸ್ಥೆ ಏನು? ಹಾಗೆ ನೋಡಿದರೆ ನಮ್ಮೂರ ಉತ್ತರ ಕರ್ನಾಟಕದ ಕಡೆ ಹೈನುಗಾರಿಕೆಗೆ ಸೂಕ್ತವಾದ ಪ್ರಾಣಿ ಎಮ್ಮೆ. ನಮ್ಮೂರಿನ ಹುಡುಗರು ಈಗಲೂ ಕೂಡ ಎಮ್ಮೆ ಹಾಲು, ಮೊಸರು, ಬೆಣ್ಣೆ ತಿಂದುಕೊಂಡೆ ಗರಡಿ ಮನೆ ಸಾಥ್ ಮಾಡುವುದು. ಔಷಧಿಗೆ ಹೆಚ್ಚು ಬಳಕೆಯಾಗುವುದು ಮೇಕೆ ಹಾಲು. ಆದರೆ ಗೋಹತ್ಯೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಗಳಂತೆ ಎಮ್ಮೆ-ಮೇಕೆಗಳ ಹತ್ಯೆ ವಿರೋಧಿಸಿ ಪ್ರತಿಭಟನೆಗಳು ನಡೆದದ್ದನ್ನು ನಾನು ಎಲ್ಲಿಯೂ ಕೇಳಿಲ್ಲ.

ಅಷ್ಟಕ್ಕೂ ಪ್ರಾಣಿಬಲಿಯನ್ನು ಸಾರ್ವಜನಿಕವಾಗಿ ಹಬ್ಬದಂತೆ (ಮಡೆಸ್ನಾನದಂತೆ) ಆಚರಿಸುವುದನ್ನು ನಾನು ವಿರೋಧಿಸುತ್ತೇನೆ. ಸರಕಾರವೇ ಪ್ರಾಣಿಬಲಿಯನ್ನು ನಿಷೇಧಿಸಿದೆಯಲ್ಲ? ಆದರೂ ಕೆಲವು ದಲಿತ ಸಮುದಾಯಗಳು ಕದ್ದುಮುಚ್ಚಿ ತಮ್ಮ ದೇವರುಗಳಿಗೆ ಪ್ರಾಣಿಬಲಿ ಕೊಡುವುದು ಮತ್ತು ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲುಪಾಲಾಗುವುದು ಆಗಾಗ ನಡೆಯುತ್ತಲೆ ಇರುತ್ತದೆ.

ಆದರೆ ಈ ಮಡೆಸ್ನಾನ ಎಂಬ ಘನ ಆಚರಣೆಗೆ ಸರಕಾರ ಮತ್ತು ಕೆಲವು ಮಠಾಧಿಪತಿಗಳೆ ಬೆಂಬಲ ಸೂಚಿಸಿದ್ದಾರೆ. ಅದರಲ್ಲೂ ವಿ.ಎಸ್.ಆಚಾರ್ಯ ಎಂಬ ಮಾನ್ಯ ಸಚಿವರಂತೂ `ಜನರ ನಂಬಿಕೆಗಳನ್ನು ನಾವು ಮುಟ್ಟುವುದಿಲ್ಲ. ಈ ಮಡೆಸ್ನಾನದಿಂದ ಅವರ ಚರ್ಮವ್ಯಾದಿಗಳು ಕಡಿಮೆಯಾಗುವುದಿದ್ದರೆ ಅದಕ್ಕೆ ನಾವೇಕೆ ಅಡ್ಡಬರುವುದು,” ಎಂದು ತಿಪ್ಪೆ ಸಾರಿದ್ದಾರೆ. ಅವರು ಈ ಹಿಂದೆ ಡಾಕ್ಟರಿಕೆಯನ್ನು ಓದಿ ವೈದ್ಯರು ಆಗಿದ್ದುದರಿಂದ ಅವರ ಹೇಳಿಕೆ ವಿಶೇಷ ಕಳೆಯಿಂದ ಕೂಡಿದೆ.

ಪ್ರಾಣಿಬಲಿಯಂಥ ಆಚರಣೆಗಳನ್ನು ದಲಿತರು ಆಚರಿಸಿದರೆ ಅವರನ್ನು ಒದ್ದು ಜೈಲಿಗೆ ಹಾಕುವ ಸರಕಾರ, ಇನ್ನೊಂದೆಡೆ ಮೇಲ್ವರ್ಗದವರು ದಲಿತರ ಮೇಲೆ ವಿಜಯೋತ್ಸವದಂತೆ ಆಚರಿಸುವ ಮಡೆಸ್ನಾನದಂತಹ ಅನಾಗರಿಕ ಆಚರಣೆಗೆ ಬೆಂಬಲ ಘೋಷಿಸುತ್ತದೆ. ಕೆಲವರು ಎಂಜಲೆಲೆಯ ಮೇಲೆ ಕೇವಲ ದಲಿತರಷ್ಟೆ, ಎಲ್ಲ ವರ್ಗದವರು ಉರುಳುತ್ತಾರೆ ಎಂದು ಸಮರ್ಥಿಸಿಕೊಳ್ಳುತ್ತಾರೆ. ಆದರೆ ಉಂಡು ಎಂಜಲು ಮಾಡುವವರು ಬ್ರಾಹ್ಮಣರು ಮಾತ್ರವಲ್ಲವೆ? ಇಷ್ಟಕ್ಕೂ ಯಾರೆ ಉರುಳಾಡಲಿ. ದೇವರ ಹೆಸರಿನಲ್ಲಿ ಹೀಗೆ ಎಂಜಲಿನ ಮೇಲೆ ಉರುಳಾಡುವುದು ಸರಿಯೆ?. ದೇವರು ದೈರ್ಯ ವಹಿಸಿ ಪ್ರತ್ಯಕ್ಷವಾಗುವಂತಿದ್ದರೆ ಈ ಅಸಹ್ಯವನ್ನು ಸಹಿಸಿಕೊಳ್ಳುತ್ತಿದ್ದನೆ?

ಮಡೆಸ್ನಾನ ತಪ್ಪು ಅಂತ ಗೊತ್ತಿದ್ದೂ ಸಮರ್ಥಿಸಿಕೊಳ್ಳುವುದರ ಬಗ್ಗೆ ನನಗೆ ಅತೀವ ಬೇಸರವಾಗಿದೆ. ಹೀಗೆ ಸಮರ್ಥಿಸಿಕೊಳ್ಳವವರಲ್ಲಿ ಬಹುತೇಕ ಮೇಲ್ವರ್ಗದವರೆ ಅಗಿರುವುದು ಕಾಕತಾಳಿಯವೆಂದೆನೂ ಅನಿಸುವುದಿಲ್ಲ. ಅಥವಾ ಅವರಿಗೆ ಮಡೆಸ್ನಾನ ತಪ್ಪು ಎಂದು ಎನಿಸುತ್ತಿಲ್ಲವೆಂದರೆ ಅದು ನಮ್ಮ ದೇಶದ ಮಹಾನ್ ಸಂಸ್ಕೃತಿಯ ದೌರ್ಭಾಗ್ಯ.

ಅಸ್ಪಶ್ಯತೆಯಂತಹ ನೆನಪಿಸಿಕೊಳ್ಳಲಿಕ್ಕೂ ಅಸಹ್ಯವೆನಿಸುವಂಥ ದೌರ್ಜನ್ಯಗಳನ್ನು ಸಾವಿರಾರು ವರ್ಷಗಳಿಂದಲೂ ದಲಿತರ ಮೇಲೆ ಮಾಡಿಕೊಂಡು ಬಂದಿರುವ ಮೇಲ್ಜಾತಿಯವರು ಈಗಲೂ ಏಕೆ ತಮ್ಮ ಹಠವನ್ನೆ ಸಾಧಿಸಲೆತ್ನಿಸುತ್ತಾರೆಯೋ ತಿಳಿಯದು. ಈಗಷ್ಟೆ ಗತ ಅವಮಾನಗಳಿಂದ ಚೇತರಿಸಿಕೊಳ್ಳುತ್ತಿರುವ ದಲಿತರ ಮೇಲೆ ಮಡೆಸ್ನಾನದಂತಹ ಆಯುಧಗಳನ್ನು ಸೃಷ್ಟಿಸಿ ಪ್ರಯೋಗಿಸುವುದು ಸರಿಯೆ? ದಲಿತರೆ ಆಯುಧ, ದಲಿತರೆ ವೈರಿ.

ಮೇಲ್ಜಾತಿಯವರೆ ನೇತೃತ್ವ ವವಹಿಸಿಕೊಂಡು ಮಡೆಸ್ನಾನವನ್ನು ವಿರೋಧಿಸುತ್ತಿದ್ದರೆ ಎಷ್ಟೊಂದು ಚಂದವಾಗಿರುತ್ತಿತ್ತು? ಶಿವರಾಮು ಅವರ ಸಂಘಟನೆಯ ಬದಲಿಗೆ ಬ್ರಾಹ್ಮಣರ ಸಂಘಟನೆಯೊಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿ ಪ್ರತಿಭಟಿಸಿದ್ದರೆ ಎಷ್ಟೊಂದು ಅರ್ಥಪೂರ್ಣವಾಗಿರುತ್ತಿತ್ತು? ದಲಿತ ಸಂತ ದೇವನೂರು ಮಹಾದೇವ ಅವರು ಬಯಸುವಂತೆ ಈ ದೇಶದಲ್ಲಿನ ಎಲ್ಲ ಮನುಷ್ಯರು ಪರಸ್ಪರ ಭಾವ-ಮೈದುನರಾಗುವ, ನೆಂಟಸ್ಥರಾಗಿ ತೊಡೆಗೆ ತೊಡೆ ತಾಗಿಸಿಕೊಂಡು ಕುಳಿತು ಸಹಪಂಕ್ತಿ ಭೋಜನ ಮಾಡುವಂತಾಗಿದ್ದರೆ ಎಷ್ಟೊಂದು ಚಂದ ಅನಿಸುತ್ತಿತ್ತಲ್ಲವೇ? ಆ ದಿನ ನಮ್ಮ ತಲೆಮಾರಿನವರ ಆಯುಷ್ಯದಲ್ಲಿಯೆ ಬರಲಿ ಎಂದು ಆಶಿಸುತ್ತೇನೆ. ಕಾಯುತ್ತೇನೆ ಕೂಡ!

Saturday, November 26, 2011

ಸುದ್ದಿಮನೆಯ ದೋಸೆಯೂ ತೂತೆ

-ಹನುಮಂತ ಹಾಲಿಗೇರಿ

ಮೊನ್ನೆಯಷ್ಟೆ ಮಾಧ್ಯಮ ಕಚೇರಿಗಳ ಸುದ್ದಿ ಸಂಪಾದನೆ ವಿಭಾಗಗಳಲ್ಲಿ ಒಂದು ಸುದ್ದಿ ಬಿಸಿ ಬಿಸಿ ಚರ್ಚೆಗೀಡಾಗಿ ಅಷ್ಟೆ ವೇಗದಲ್ಲಿ ಬಿಸಿ ಕಳೆದುಕೊಂಡಿತು. ಉದಯವಾಣಿ ಪತ್ರಿಕೆಯ ವರದಿಗಾರ ಸುರೇಶ್ ಪುದವೆಟ್ಟು ಅವರು ಸಚಿವ ಮುರುಗೇಶ್ ನಿರಾಣಿಯವರ ಭ್ರಷ್ಟಾಚಾರದ ಬಗ್ಗೆ ಒಂದು ಲೇಖನ ಬರೆದಿದ್ದರು. ಇದು ನಿರಾಣಿಯವರ ಕಣ್ಣು ಕೆಂಪಗಾಗಲು ಕಾರಣವಾಗಿರಬೇಕು. ಸುರೇಶ್ ಅವರ ಹೆಂಡತಿ ಮಾನಸ ಪುದುವೆಟ್ಟ ನಿರಾಣಿ ಮಾಲಿಕತ್ವದ ಸಮಯ ಚಾನಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರನ್ನು ಕಾರಣವಿಲ್ಲದೆ ದೂರದ ಗುಲ್ಬರ್ಗಕ್ಕೆ ವರ್ಗ ಮಾಡಲಾಯಿತು. ಅವರು ಗುಲ್ಬರ್ಗಕ್ಕೆ ಹೋಗಲಾರದೆ ಕೆಲಸಕ್ಕೆ ರಾಜಿನಾಮೆ ನೀಡಿದರು. ಎಂಥ ವಿಚಿತ್ರ ನೋಡಿ, ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ!

ಈ ಘಟನೆಯನ್ನು ಸಕ್ರಿಯ ಪತ್ರಕರ್ತರೆಲ್ಲರೂ ತಮ್ಮ ಆತ್ಮೀಯ ವಲಯಗಳಲ್ಲಿ ಗುಸು ಗುಸು ಮಾತಾಡಿದರು. ಒಂದು ಕ್ಷಣ, ಛೆ, ಹೀಗಾಗಬಾರದಿತ್ತು ಎಂದು ನಿಟ್ಟುಸಿರು ಬಿಟ್ಟರು. ಮುಂದಿನ ಕ್ಷಣ ಕ್ಯಾಮರಾ, ಪೆನ್ನು ಪ್ಯಾಡು ಸೇರಿದಂತೆ ಸಾಮಾನು ಸರಂಜಾಮುಗಳನ್ನು ಹೆಗಲೇರಿಸಿಕೊಂಡು ಸುದ್ದಿಗಳ ಬೇಟೆಗೆ ನಡೆದುಬಿಟ್ಟರು. ಅಲ್ಲಿಗೆ ಭರಿ ಗದ್ದಲವೆಬ್ಬಿಸಬೇಕಾದ ಸುದ್ದಿಮನೆಯದೆ ಸುದ್ದಿಯೊಂದು ಹಳತಾಗಿ ಸತ್ತು ಹೋಯಿತು. ರವಿ ಕೃಷ್ಣಾರೆಡ್ಡಿಯವರು ತಮ್ಮ ವರ್ತಮಾನ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದ್ದನ್ನು ಬಿಟ್ಟರೆ ಈ ಸುದ್ದಿ ಎಲ್ಲಿಯೂ ಸುದ್ದಿ ಮಾಡಲೆ ಇಲ್ಲ.

ಇಂಥ ಘಟನೆ ಯಾವುದೊ ಒಂದು ಕಾರ್ಖಾನೆಯ ಕಾರ್ಮಿಕನ ಮೇಲೆ ನಡೆದಿದ್ದರೆ ಅದರ ಸುದ್ದಿಯೇ ಬೇರೆಯಾಗಿರುತ್ತಿತ್ತು. ಕಾರ್ಖಾನೆಯ ಆಡಳಿತ ಮಂಡಳಿಯ ವಿರುದ್ಧ ದೊಡ್ಡ ಪ್ರತಿಭಟನೆಯೇ ನಡೆದು ಮಾಲಿಕರು ಕ್ಷಮೆ ಕೋರಿ ಮತ್ತೆ ತಮ್ಮ ಆದೇಶವನ್ನು ಹಿಂಪಡೆಯುವಷ್ಟರ ಮಟ್ಟಿಗೆ ಬೆಳೆಯುತ್ತಿತ್ತು. ಆದರೆ ದಿನನಿತ್ಯ ಅಂತಹ ಹತ್ತಾರು ತರಹದ ಪ್ರತಿಭಟನೆಗಳಿಗೆ ಹಾಜರಾಗಿ ವರದಿ ಮಾಡುವ ನಮ್ಮ ಸುದ್ದಿ ಸಂಸ್ಥೆಗಳಿಗೆ ಏನಾಗಿದೆ? ದಿನನಿತ್ಯ ಇಂತಹ ದೌಜನ್ಯಗಳನ್ನು ಸಹಿಸಿ ಮನಸ್ಸು ಜಡಗೊಂಡಿದೆಯೆ? ಇಂಥ ಘಟನೆ ದೌರ್ಜನ್ಯವೆಂದು ಅನಿಸಲೆ ಇಲ್ಲವೆ?

ಕಡೆಪಕ್ಷ ಮಾಧ್ಯಮಗಳ ಮುಖ್ಯಸ್ಥರಾದರೂ ಈ ಬಗ್ಗೆ ದ್ವನಿ ಎತ್ತಬೇಕಾಗಿತ್ತು. ಆಯಕಟ್ಟಿನ ಸ್ಥಳದಲ್ಲಿ ಮೇಯುತ್ತ ಕುಳಿತಿರುವ ಅವರ್ಯಾಕೆ ಈ ಬಗ್ಗೆ ತಲೆ ಕೆಡಿಸಿಕೊಂಡಾರು. ಯಾರೇನೇ ಹೇಳಲಿ ಇನ್ನೊಬ್ಬರ ತಟ್ಟೆಯಲ್ಲಿ ಬಿದ್ದಿರುವ ನೋಣದ ಬಗ್ಗೆ ತಲೆಕೆಡಿಸಿಕೊಳ್ಳುವವರ ತಟ್ಟೆಯಲ್ಲಿಯೆ ಕತ್ತೆ ಸತ್ತು ಬಿದ್ದಿದೆ. ಸುದ್ದಿ ಮನೆಯ ದೋಸೆಯೂ ತೂತೆ! ಪ್ರಜಾಪ್ರಭುತ್ವದ ಮೂರು ಅಂಗಗಳನ್ನು ಸದಾ ಎಚ್ಚರದ ಸ್ಥಿತಿಯಲ್ಲಿರುವುದನ್ನು ನೋಡಿಕೊಳ್ಳಬೇಕಾದ ಮಾಧ್ಯಮರಂಗವೇ ಕುಲಗೆಟ್ಟುಹೋಗಿದೆ. ಪರಿಶುದ್ಧಗೊಳಿಸಬೇಕಾದ ಗಂಗಾಜಲವೇ ಹೊಲಸುಗಬ್ಬೆದ್ದು ನಾರುತ್ತಿದೆ.

ಪತ್ರಿಕೆ ಎಂದೊಡನೆ ಬಹಳಷ್ಟು ಜನರಿಗೆ `ವಸ್ತುನಿಷ್ಟ’ಎಂಬ ಶಬ್ದ ತಟ್ಟನೆ ತಮ್ಮ ಸ್ಮತಿ ಪಟದಲ್ಲಿ ಕಾಣಿಸಿಕೊಳ್ಳುತ್ತದೆ. ದೇಶದಲ್ಲಿ ಪತ್ರಿಕೋದ್ಯಮ ಇನ್ನು ಬೆಳೆಯುವ ಹಂತದಲ್ಲಿಯೆ ಇರುವಾಗಲೆ ಡಿವಿಜಿಯವರು ಬರೆದಿರುವ `ವೃತ್ತಪತ್ರಿಕೆ’ ಎಂಬ ಪುಸ್ತಕವನ್ನು ಓದಿದರೆ ಪತ್ರಿಕೋದ್ಯಮಕ್ಕೂ ಶಬ್ದಕ್ಕೂ ಇರುವ ನಂಟಿನ ಅರಿವಾಗುತ್ತದೆ. ಪತ್ರಿಕೆಗಳಲ್ಲಿನ ಸುದ್ದಿ ವಸ್ತುನಿಷ್ಟ ಎನ್ನುವ ಕಾರಣಕ್ಕಾಗಿಯೆ ಬಹಳಷ್ಟು ಜನರು ನೂರಕ್ಕೆ ನೂರರಷ್ಟು ನಂಬಿ ಬಿಡುತ್ತಾರೆ. ಆದರೆ ನಂಬುತ್ತಾರೆ ಎಂದು ಗೊತ್ತಿದ್ದೂ ಸುದ್ದಿಕರ್ತರು ಸುಳ್ಳು ಸುದ್ದಿ ಸೃಷ್ಟಿಸುತ್ತಾರೆ. ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತೆ.

ಪತ್ರಿಕೋಧ್ಯಮದ ವಿದ್ಯಾರ್ಥಿ ಜೀವನದಲ್ಲಿ ಬಹಳಷ್ಟು ವಿಜೃಂಭಿಸುವ `ವಸ್ತುನಿಷ್ಟತೆ’ಎನ್ನುವ ಶಬ್ದ, ವಿದ್ಯಾರ್ಥಿ ಮಾದ್ಯಮರಂಗಕ್ಕೆ ಪ್ರಾಯೋಗಿಕವಾಗಿ ಇಳಿದ ನಂತರ ನಿಧಾನಕ್ಕೆ ತನ್ನ ಮರೆಯಾಗುತ್ತಾ ಹೋಗುತ್ತದೆ. ಈ ಮರೆಯಾಗಿಸುವ ಕ್ರಿಯೆಯನ್ನು ಮರಿ ಪತ್ರಕರ್ತ ತನ್ನ ಹಿರಿ ಪತ್ರಕರ್ತರಿಂದಲೆ ಕಲಿಯುತ್ತಾ ಹೋಗುತ್ತಾನೆ. ವಾಸ್ತವ ಪತ್ರಿಕೋದ್ಯಮವೇ ಬೇರೆ, ವಾಸ್ತವವೇ ಬೇರೆ ಎಂದು ಮರಿ ಪತ್ರಕರ್ತನಿಗೆ ಅನಿಸತೊಡಗುತ್ತದೆ. ವೈದ್ಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಾಮಾಣಿಕತೆಯ ಬಗ್ಗೆ ಪ್ರಮಾಣ ಬೋಧಿಸುವ ಸಂಪ್ರದಾಯ ಈಗಲೂ ಚಾಲ್ತಿಯಲ್ಲಿದೆ. ಆ ಸಂಪ್ರದಾಯ ಪತ್ರಿಕೋದ್ಯಮ ಕಾಲೇಜುಗಳಿಗೂ ವಿಸ್ತರಣೆಯಾದಾರೆ ಒಳಿತು ಎನಿಸುತ್ತದೆ.

ಇರುವ ಸುದ್ದಿಗೂ ಮಾಧ್ಯಮಗಳಲ್ಲಿ ಬರುವ ಸುದ್ದಿಗೂ ಬಹುತೇಕ ಸಂದರ್ಭಗಳಲ್ಲಿ ಬಹಳಷ್ಟು ವ್ಯತ್ಯಾಸವಾಗುತ್ತದೆ. ವರದಿಗಾರನ ಮನೋಸ್ಥಿತಿ, ಹಿನ್ನೆಲೆ, ಪೂರ್ವಾಗ್ರಹಗಳು ಸ್ವಲ್ಪಮಟ್ಟಿಗಾದರೂ ಸುದ್ದಿ ಸಂಪಾದನೆಯಲ್ಲಿ ತಮ್ಮ ಮೂಗನ್ನು ತೂರಿಸಿಯೇ ಬಿಟ್ಟಿರುತ್ತವೆ. ಕೆಲವು ಸಂದರ್ಭದಲ್ಲಿ ವಸ್ತುನಿಷ್ಟತೆ ಸಂಪೂರ್ಣವಾಗಿ ತಿರುಚಲ್ಪಟ್ಟರೂ ಅಡ್ಡಿಯಿಲ್ಲ.

ವರದಿಗಾರ, ಹಿರಿಯ ವರದಿಗಾರ, ಸುದ್ದಿ ಸಂಪಾದಕ-ಸಂಪಾದಕನ ಮೂಲಕ ಹಾದು ಹೋಗುವ ಸುದ್ದಿಗಳು ಪ್ರತಿ ಹಂತದಲ್ಲಿಯೂ ಬದಲಾಗುತ್ತಾ ಹೋಗುತ್ತವೆ. ಕೆಲವೊಮ್ಮೆ ಆಯಾ ಸುದ್ದಿಗಳ ಮೇಲೆ, ಪತ್ರಿಕೆಯ ದೇಯೋದ್ದೇಶ, ಪತ್ರಿಕೆಯ ಮಾಲಿಕನ ಮರ್ಜಿ, ಪ್ರಸರಣ ವಿಭಗ, ಜಾಹಿರಾತು ವಿಭಾಗಗಳು ಪ್ರಭಾವ ಬೀರುತ್ತವೆ. ಈ ಎಲ್ಲ ಹಾದಿಗಳಲ್ಲಿ ಹಾದು ಬಂದ ಮೇಲೆ ಅಳಿದುಳಿದ ಸುದ್ದಿ ಕೆಲವೊಮ್ಮೆ ಸಣ್ಣದಾಗಿ ನಕಾರಾತ್ಮಕಾವಾಗಿಯೂ, ಹಲವೊಮ್ಮೆ ದೊಡ್ಡದಾಗಿ ಸಕಾರಾತ್ಮಕವಾಗಿಯೂ ಪ್ರಕಟನೆಯ ಹಂತಕ್ಕೆ ಬರುತ್ತದೆ. ಅದನ್ನು ಓದುಗ ಓದುತ್ತಾನೆ ಮತ್ತು ನಂಬುತ್ತಾನೆ.

ತಮ್ಮ ಮಾಧ್ಯಮ ಸಂಸ್ಥೆಗಳಲ್ಲಿ ವಾಸ್ತವಾಂಶಗಳನ್ನು ಮುಚ್ಚಿಟ್ಟು ಸುದ್ದಿಗಳನ್ನು ಮಾಲಿಕರ, ಜಾಹಿರಾತುದಾರರ, ಸಂಪಾದಕರ ಮರ್ಜಿಗಳಂತೆ (ಓದುಗರ ಮರ್ಜಿಯನ್ನು ಹೊರತು ಪಡಿಸಿ) ತಿರುಚಿ ಬರೆಯುವ ಕೆಲವಾದರೂ ಪ್ರಾಮಾಣಿಕ ಪತ್ರಕರ್ತರಿಗೆ ಒಳಗೊಳಗೆ ಬೇಸರವಿದೆ. ಈ ಬಗ್ಗೆ ಮರುಕವಿದೆ. ಇಂಥವರು ಸುದ್ದಿ ಮನೆಯಿಂದ ಸುದ್ದಿಮನೆಗೆ ಅಲೆದಾಡುತ್ತಲೆ ಇರುತ್ತಾರೆ. ಆದರೆ ಎಲ್ಲ ಸುದ್ದಿ ಮನೆಗಳ ದೊಸೆಯೂ ತೂತೆ ಎಂದು ಅರಿವಾಗುವಷ್ಟರಲ್ಲಿ ಸೋತು ಹೋಗಿರುತ್ತಾರೆ. ಆದಾಗ್ಯೂ ತಮ್ಮ ಮಿತಿಯಲ್ಲಿ ಏನಾದರೂ ಮಾಡಬೇಕು ಎಂಬ ತುಡಿತಕ್ಕೆ ಮಿಡಿಯುತ್ತಲೆ ಇರುತ್ತಾರೆ. ಇಂಥ ಪ್ರಾಮಾಣಿಕ ಪತ್ರಕರ್ತರಿಗೆ ಜಾಲತಾಣಗಳು, ಬ್ಲಾಗ್‌ಗಳು ಮರುಭೂಮಿಯಲ್ಲಿ ಕಂಡ ಒಯಸಿಸ್‌ಗಳಾಗಿ ಒದಗುತ್ತಿವೆ. ಸುದ್ದಿ ಮನೆಗಳಲ್ಲಿ ಸುಳ್ಳು-ಪಳ್ಳು ಬರೆದು ಪಾಪ ಮಾಡುವ ಪತ್ರಕರ್ತರು ಜಾಲತಾಣಗಳಲ್ಲಿ ಅನಾಮಧೇಯರ ಹೆಸರಿನನಲ್ಲಿ ಸತ್ಯ ಬರೆದು ಪಾಪ ಪರಿಹಾರ ಮಾಡಿಕೊಳ್ಳುತ್ತಿದ್ದಾರೆ. ಸಂಪಾದಕೀಯ, ಕಾಲಂ 9, ವರ್ತಮಾನದಂತಹ ಕೆಲವು (ನನಗೆ ಗೊತ್ತಿರುವ) ಜಾಲತಾಣಗಳು ಮಾಧ್ಯಮರಂಗದ ಹುಳುಕುಗಳನ್ನು ಹೊರಗೆ ಹಾಕಲಿಕ್ಕೆ ಹುಟ್ಟಿಕೊಂಡಂತೆ ಕೆಲಸ ಮಾಡುತ್ತಿವೆ. ಇನ್ನು ಪತ್ರಿಕಗಳಲ್ಲಿ ತಮ್ಮ ಅಭಿರುಚಿ, ಆಸಕ್ತಿಗಳನ್ನು ತಣಿಸಿಕೊಳ್ಳಲಾಗದ ಹಲವು ಸೃಜನಶೀಲ ಪತ್ರಕರ್ತರು ತಮ್ಮದೊಂದು ಬ್ಲಾಗ್ ಸೃಷ್ಟಿಸಿ ಅವುಗಳಲ್ಲಿ ಕತೆ-ಕವಿತೆಗಳ ಶಿಲ್ಪ ಕೆತ್ತುವುದಕ್ಕೆ ಶುರು ಹಚ್ಚಿಕೊಂಡಿದ್ದಾರೆ.

ಸುದ್ದಿಮನೆ ದೊಸೆಯ ತೂತುಗಳನ್ನು ನೋಡಿ ನೋಡಿ ಬೇಸರಗೊಂಡ ಕೆಲವು ಪತ್ರಕರ್ತರು ಇಂಥದರ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಮೂಗು ತೂರಿಸಲು ಹೋಗದೆ ಸುಮ್ಮನೆ ತಮಗೆ ವಹಿಸಿದ ಅಸೈನ್‌ಮೆಂಟ್‌ಗಳನ್ನು (ಪುಸ್ತಕ ಬಿಡುಗಡೆ, ಸಂಗೀತ ಕಾರ್ಯಕ್ರಮಗಳ ಉದ್ಘಾಟನೆಯಂಥವು. ಪೊಲಿಟಿಕಲ್ ರಿಪೋರ್ಟರ್ಸ್ ಭಾಷೆಯಲ್ಲಿ ಹೇಳುವುದಾದರೆ ಚಿಲ್ರೆ ಪಲ್ರೆ ಅಸೈನ್‌ಮೆಂಟ್‌ಗಳು) ಮುಗಿಸಿ ರಂಗಭೂಮಿ, ಸಾಹಿತ್ಯದಂತಹ ಹವ್ಯಾಸಗಳಲ್ಲಿ ಕಳೆದುಹೋಗುತ್ತಾರೆ. ಇಂಥವರಿಗೆ ಹೊಟ್ಟೆ ಹೊರೆಯಲು ಇದೊಂದು ಉದ್ಯೋಗವಷ್ಟೆ. ಬಹುತೇಕ ನಾನು ಇಂಥವರ ಸಾಲಿಗೆ ಸೇರುತ್ತೇನೆ ಎಂದರೆ ಅಡ್ಡಿಯಿಲ್ಲ.